ಸದಾಶಿವರಾಯ
	ವಿಜಯನಗರದ ತುಳುವ ವಂಶದ ರಾಜ (1543-70). ಅಚ್ಯುತರಾಯನ ತಮ್ಮ ರಂಗನ ಮಗ. ಅಚ್ಯುತರಾಯನ ಮರಣಾ ನಂತರ (1542) ಆತನ ಮಗ ವೆಂಕಟಾದ್ರಿಗೆ ಪಟ್ಟವಾಯಿತು. ಇದನ್ನು ಪ್ರತಿಭಟಿಸಿ ಸಿಂಹಾಸನಕ್ಕಾಗಿ ಉಗ್ರ ಕದನ ನಡೆಯಿತು. ಇದರಲ್ಲಿ ಒಂದು ಪಕ್ಷ ಕೃಷ್ಣದೇವರಾಯನ ಅಳಿಯನಾದ ರಾಮರಾಯನದು.  ಬಹು ಪ್ರಭಾವಶಾಲಿಯಾಗಿದ್ದ ಈತ ಸದಾಶಿವರಾಯನಿಗೆ ಪಟ್ಟಕಟ್ಟಿದ (1543).  ಆಗ ಸದಾಶಿವರಾಯ ಇನ್ನೂ ಯುವಕನೂ ರಾಜಕೀಯದಲ್ಲಿ ಅನುಭವವಿಲ್ಲದವನೂ ಆಗಿದ್ದರಿಂದ, ರಾಜಕೀಯದಲ್ಲಿ ಪಳಗಿದವನೂ ಸಮರ್ಥನೂ ಮಹತ್ತ್ವಾಕಾಂಕ್ಷಿಯೂ ಆಗಿದ್ದ ರಾಮರಾಯ ಈ ಸದವಕಾಶವನ್ನು ತನ್ನ ಸ್ವಾರ್ಥಸಾಧನೆಗೆ ಸಂಪೂರ್ಣವಾಗಿ ಉಪಯೋಗಿಸಿ ಕೊಂಡ. ಸದಾಶಿವರಾಯ ವಿಜಯನಗರ ಸಾಮ್ರಾಜ್ಯದ ನಾಮಮಾತ್ರ ಅಧಿಪತಿಯಾದ. ಅದರ ಆಡಳಿತ, ಅಧಿಕಾರದ ಸೂತ್ರಗಳೆಲ್ಲ ರಾಮರಾಯನ ವಶಕ್ಕೆ ಹೋದವು. ಈತ ಸುಮಾರು ಏಳು ವರ್ಷ (1543-1550) ತಾನು ರಾಜಕುಮಾರನ ಪಾಲಕ, ಪ್ರತಿನಿಧಿಯೆಂದು ರಾಜ್ಯಭಾರ ಮಾಡಿದ. ಅಷ್ಟರಲ್ಲಿ ವಯಸ್ಸಿಗೆ ಬಂದ ಸದಾಶಿವರಾಯ ತನ್ನ ಬಾಧ್ಯತೆಯ ಅಧಿಕಾರವನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿದ. ಇದನ್ನು ಸೈರಿಸಲಾರದೆ ರಾಮರಾಯ ಸದಾಶಿವರಾಯನನ್ನು ರಾಜ್ಯಾಧಿಕಾರ ದಿಂದ ಅಗಲಿಸಿ ಬಂಧನದಲ್ಲಿಟ್ಟು ಸ್ವಯಂ ಸಮ್ರಾಟನಂತೆ ವೈಭವದಿಂದ ಸರ್ವಾಧಿಕಾರಿ ಪ್ರಭುತ್ವವನ್ನು ನಿರ್ವಹಿಸಿದ. ಮುಂದೆ ಸುಮಾರು ಹದಿನೈದು ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯದ ಸಮಸ್ತ ರಾಜಕೀಯ ಕಾರ್ಯಕಲಾಪಗಳನ್ನು ಉತ್ತರೋತ್ತರ ಪ್ರಭಾವಶಾಲಿಯಾಗಿ ಊರ್ಜಿತಗೊಳಿಸಿದ ರಾಮರಾಯ ರಕ್ಕಸತಂಗಡಿಯ ಮಹಾಯುದ್ಧದಲ್ಲಿ (1565) ಪರಾಜಯ ಹೊಂದಿ ಹತನಾದ. ಇದರ ಪರಿಣಾಮದಿಂದ ವಿಜಯನಗರ ಸಾಮ್ರಾಜ್ಯದ ವ್ಯಾಪ್ತಿ ಕುಗ್ಗಿತು. ರಾಮರಾಯ ಸತ್ತರೂ ಸದಾಶಿವರಾಯನ ಕಷ್ಟಕಾಲ ಕೊನೆಗೊಳ್ಳಲಿಲ್ಲ. ರಾಮರಾಯನ ತರುವಾಯ ವಿಜಯನಗರದ ಶಾಸನಾಧಿಕಾರ ಆತನ ತಮ್ಮನೂ ಪ್ರಧಾನ ಮಂತ್ರಿಯೂ ಆಗಿದ್ದ ತಿರುಮಲನ ವಶಕ್ಕೆ ಹೋಯಿತು. ಸದಾಶಿವರಾಯ ಹಿಂದಿನಂತೆ ರಾಜಬಂದಿಯಾಗಿಯೇ ಉಳಿದ. ಈತ ಜೀವಿಸಿರುವ ತನಕ ವಿಜಯನಗರದ ಸಿಂಹಾಸನವನ್ನು ಪಡೆಯಬೇಕೆಂಬ ತಿರುಮಲನ ಹೆಬ್ಬಯಕೆ ಈಡೇರುವಂತಿರಲಿಲ್ಲವಾದ್ದರಿಂದ ಸದಾಶಿವ ಪ್ರಾಣಕ್ಕೆ ಎರವಾಗ ಬೇಕಾಯಿತು (1570). ಅನಂತರ ಅರವೀಡು ವಂಶದ ತಿರುಮಲ ಯಾವ ಅಡಚಣೆಯೂ ಇಲ್ಲದೆ ವಿಜಯನಗರದ ಸಿಂಹಾಸನವನ್ನೇರಿದ. 				
				(ಪಿ.ಬಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ